ಸದ್ಯದಲ್ಲಿಯೇ ಪೌರಕಾರ್ಮಿಕರ ಅಭಿವೃದ್ಧಿ ನಿಗಮ ಸ್ಥಾಪನೆ

ಕಲಬುರಗಿ, ಅ. 6: ರಾಜ್ಯದಲ್ಲಿ ಪೌರ ಕಾರ್ಮಿಕರಿಗಾಗಿ ಹಾಗೂ ಅವಲಂಬಿತರಾಗಿ ಸರ್ಕಾರ ಎಲ್ಲಾ ಸವಲತ್ತುಗಳು ದೊರಕುವಂತೆ ಮಾಡಲು ಪ್ರತ್ಯೇಕ ಪೌರಕಾರ್ಮಿಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲಾಗವುದು ಎಂದು ಕರ್ನಾಟಕ ಸಫಾಯಿ ಕರ್ಮಚಾರಿಗಳ ಆಯೋಗ ಅಧ್ಯಕ್ಷ ನಾರಾಯಣ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಸುಮಾರು 35 ಸಾವಿರ ಪೌರಕಾರ್ಮಿಕರು ಬಿಬಿಎಂಪಿ ಸೇರಿ ವಿವಿಧ ಮಹಾನಗರ ಪಾಲಿಕೆ, ನಗರ ಸಭೆ, ಪುರಸಭೆಯಲ್ಲಿ ಗುತ್ತಿಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ನಗರವನ್ನು ಸ್ವಚ್ಛವಾಗಿ ಇಡುವ ಅವರ ಸ್ಥಿತಿ ಚಿಂತಾಜನಕವಾಗಿರುತ್ತದೆ. ಆದರೆ ಅವರ ಅಭಿವೃದ್ಧಿಗೆ ವಿವಿಧ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಿದರೂ ಉಪಯೋಗವಾಗುತ್ತಿಲ್ಲ. ಅದಕ್ಕಾಗಿ ಗುಜರಾತ ರಾಜ್ಯದಲ್ಲಿ ಇರುವ ಅಭಿವೃದ್ಧಿ ನಿಗಮದ ಕುರಿತು ಅಧ್ಯಯನ ನಡೆಸಿ ವರದಿಯನ್ನು ಮುಖ್ಯಮಂತ್ರಿಗಳಿಗೆ ನೀಡಲಾಗಿದೆ. ಕಡತವು ಹಣಕಾಸು ಇಲಾಖೆಯಲ್ಲಿದೆ. ಸದ್ಯದಲ್ಲಿಯೇ ಸಚಿವ ಸಂಪುಟದಲ್ಲಿ ತೀರ್ಮಾನ ಘೋಷಣೆ ಮಾಡಲಾಗುವದು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದು ತಿಳಿಸಿದರು.

ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರಿಗೆ ಭವಿಷ್ಯ ನಿಧಿ, ಮತ್ತು ಇಎಸ್‍ಐ ಒದಗಿಸಬೇಕು. ಆದರೆ ಅನೇಕರು ಸರಿಯಾಗಿ ಹಣ ಸಂದಾಯ ಮಾಡುತ್ತಿಲ್ಲ ಎಂಬ ಮಾಹಿತಿ ಇಂದು ನಡೆದ ಅಧಿಕಾರಿಗಳ ಸಭೆಯಲ್ಲಿ ತಿಳಿದು ಬಂದಿದೆ. ಭವಿಷ್ಯ ನಿಧಿ ಇಲಾಖೆ ಅಧಿಕಾರಿಗಳು ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳು ಪೌರ ಕಾರ್ಮಿಕರಿಗೆ ಸಕಾಲದಲ್ಲಿ ಸಂಬಳ, ಮತ್ತು ಇತರೆ ಭತ್ಯೆಗಳನ್ನು ಸಿಗುತ್ತಿವೆ ಎಂಬ ಮಾಹಿತಿ ಸಂಗ್ರಹಿಸಬೇಕು. ಗುತ್ತಿಗೆದಾರರು ಪ್ರತಿತಿಂಗಳು ಸಂಬಳ ಮಾಡಬೇಕು. ಆದರೆ ಸರ್ಕಾರದ ದುಡ್ಡಿನ ಮೇಲೆ ಸಂಬಳ ಎಂಬ ನಿಯಮ ಇಲ್ಲ. ಸರಕಾರದ ಹಣ ಸಂದಾಯವಾಗವರೆಗೆ ಗುತ್ತಿಗೆದಾರರೇ ಸಂಬಳ ನೀಡಬೇಕು, ಅಂತಹ ಪ್ರಕರಣ ಕಂಡ ಬಂದಲ್ಲಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ತಿಳಿಸಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಮಲಹೊರವ ಪದ್ದತ್ತಿ ನಿಷೇಧವಿದ್ದರು. ಇನ್ನೂ ಅನೇಕರು ಅಂತಹ ಕಾಂiÀರ್iದಲ್ಲಿ ತೊಡಗಿದ್ದಾರೆ. ಯಾರಾದರೂ ಒತ್ತಾಯ ಪೂರಕ ಕೆಲಸಕ್ಕೆ ಹಚ್ಚಿಕೊಂಡರೆ ಅಥವಾ ಪ್ರಕರಣಗಳು ಕಂಡಬಂದಲ್ಲಿ ನಿರ್ಧಾಕ್ಷ್ಯಣವಾಗಿ ಕ್ರಮಕೊಳ್ಳಲು ಜಿಲ್ಲಾಧಿಕಾರಿಗೆ ಹಾಗೂ ಪೊಲೀಸ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನವೆಂಬರ್ ತಿಂಗಳಲ್ಲಿ ಸಫಾಯಿ ಕರ್ಮಚಾರಿಗಳ ಸಮೀಕ್ಷೆ ನಡೆಸಲಾಗುವದು ಎಂದು ಪ್ರಶ್ನೆಯೊಂದಕ್ಕೆ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ವಿಪುಲ ಬನ್ಸಲ್, ಪಾಲಿಕೆ ಆಯುಕ್ತ ಪಿ. ಸುನೀಲ ಕುಮಾರ ಉಪಸ್ಥಿತರಿದ್ದರು.

Post Title

ಪರ್ಯಾಯ ಕೃಷಿನೀತಿ ಜಾರಿಗೆ ತನ್ನಿ

ಕಲಬುರಗಿ ಅ 6:sರೈತರ ಸಾವಿಗೆ ಕಾರಣವಾಗುತ್ತಿರುವ ಸದ್ಯದ ಕೃಷಿ ನೀತಿಯನ್ನು ಕೈಬಿಟ್ಟು ಪರ್ಯಾಯಕೃಷಿ ನೀತಿಗೆ ಸರಕಾರಕ್ಕೆ ಒತ್ತಾಯಿಸಿದ್ದಾಗಿ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷರಾದ ಮಾರುತಿ ಮಾನ್ಪಡೆ ಅವರು ತಿಳಿಸಿದರು.

ರಾಜ್ಯದ ರೈತ ಮುಖಂಡರ ನಿಯೋಗವು ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿ ಹಲವು ಬೇಡಿಕೆಗಳನ್ನು ಸಲ್ಲಿಸಿತು ಎಂದು ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆಮದು ಸುಂಕ ಹೆಚ್ಚಿಸಿ ರೈತರು ಬೆಳೆದ ಧಾನ್ಯಗಳಿಗೆ ಹೆಚ್ಚಿನ ಬೆಲೆ ದೊರಕುವಂತಾಗಬೇಕು.ತಾಳೆ ಎಣ್ಣೆಯ ಆಮದಿನಿಂದ ರೈತರ ಸೂರ್ಯಕಾಂತಿ ಸೇಂಗಾ ಮೊದಲಾದ ಧಾನ್ಯಗಳಿಗೆ ಬೇಡಿಕೆ ಕಡಿಮೆಯಾಗುತ್ತಿದೆ ಎಂದು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಲಾಯಿತು ಎಂದರು.

ಸಹಕಾರಿ ಸಾಲ ತಕ್ಷಣ ಮನ್ನಾ ಮಾಡಬೇಕು.ರೈತರ ಆತ್ಮಹತ್ಯೆ ತಡೆಗೆ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ರಾಜ್ಯಮಟ್ಟದಲ್ಲಿ ಉನ್ನತಮಟ್ಟದ ಸಮಿತಿ ರಚಿಸಬೇಕು.ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿಸಬೇಕು.ಪ್ರತಿ ಕೇಜಿ ಮೇವಿಗೆ 3 ರೂಪಾಯಿ ನಿಗದಿ ಪಡಿಸಿದ್ದು ಇದನ್ನು 1 ರೂಗೆ ಇಳಿಸಬೇಕು ಇಲ್ಲವೇ ಪುಕ್ಕಟೆಯಾಗಿ ವಿತರಿಸಬೇಕು ಎಂಬ ಬೇಡಿಕೆ ಸಲ್ಲಿಸಲಾಯಿತು ಎಂದರು.

ಕೇಂದ್ರದ ಅಫಿಡವಿಟ್:

ಉತ್ಪಾದನೆ ವೆಚ್ಚ ಹಾಗೂ ಅದರ ಅರ್ಧದಷ್ಟು ಲಾಭ ಸೇರಿಸಿ ಬೆಂಬಲಬೆಲೆಯನ್ನು ನಿರ್ಧರಿಸಬೇಕು ಎಂಬ ಡಾ ಸ್ವಾಮಿನಾಥನ್ ಆಯೋಗ ವರದಿ ಶಿಫಾರಸ್ಸು ಜಾರಿಗೆ ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರವು ಸುಪ್ರಿಂಕೋರ್ಟಿಗೆ ಅಫಿಡವಿಟ್ ಸಲ್ಲಿಸಿದೆ.ಲೋಕಸಭೆ ಚುನಾವಣೆಗೆ ಮುನ್ನ ಭಾರತೀಯ ಜನತಾಪಕ್ಷವು ತನ್ನ ಪ್ರನಾಳಿಕೆಯಲ್ಲಿ ಡಾ ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ತರುವದಾಗಿ ಹೇಳಿತ್ತು. ಈಗ ಪ್ರತ್ಯಕ್ಷವಾಗಿ ಆಯೋಗದ ಹೆಸರು ಸೂಚಿಸದೇ ಅಫಡವಿಟ್ ಸಲ್ಲಿಸಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ನಿಯೋಗದೊಂದಿಗೆ ಭೇಟಿಮಾಡಿ ಈ ವಿಷಯ ಕುರಿತು ಚರ್ಚಿಸಲಾಗುವದು.

ಪ್ರನಾಳಿಕೆಯಲ್ಲಿ ತಿಳಿಸಿದಂತೆ ಡಾ ಸ್ವಾಮಿನಾಥನ್ ಆಯೋಗದ ವರದಿ ಜಾರಿಗೊಳಿಸದಿದ್ದರೆ ಪಕ್ಷದ ಅಧ್ಯಕ್ಷರ ಮೇಲೆ ಮೊಕದ್ದಮೆ ಹೂಡುವ ವಿಚಾರವಿದೆ ಎಂದು ರಾಜ್ಯ ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷ ಬಸವರಾಜ ಇಂಗಿನ ಅವರು ತಿಳಿಸಿದರು

ಸುದ್ದಿಗೋಷ್ಠಿಯಲ್ಲಿ ಅಶೋಕ ಮ್ಯಾಗೇರಿ ಇದ್ದರು.

ಅಪರೂಪದ ಜೀವಿಗಳು ಕಂಡರೆ ತಿಳಿಸಿ

ಕಲಬುರಗಿ ಅ 6:ಹಾವು, ಉಡ, ಊಸರವಳ್ಳಿ ಯಂತಹ ಅಪರೂಪದ ಜೀವಿಗಳು ನಿಮ್ಮ ಪರಿಸರದಲ್ಲಿ ಕಂಡು ಬಂದರೆ ಅವುಗಳಿಗೆ ತೊಂದರೆ ಕೊಡಬೇಡಿ.ಅವುಗಳನ್ನು ಉಳಿಸಲು ಪ್ರಯತ್ನಿಸಿ.ಇಲ್ಲವೇ ನಮಗೆ ತಿಳಿಸಿ ಎಂದು ವೈಸ್ ಫಾರ್ ಲೈಫ್ ( ಬದುಕಿಗಾಗಿ ಧ್ವನಿ) ಸ್ವಯಂಸೇವಾಸಂಸ್ಥೆ ಮನವಿ ಮಾಡಿದೆ.

ಸಂಸ್ಥೆಯ ಅಧ್ಯಕ್ಷ ವಿನಯ ಪಸಾರ ಅವರು ಗುಲಬರ್ಗ ವಿಶ್ವವಿದ್ಯಾಲಯದ ಹತ್ತಿರ ತಮ್ಮ ಸಂಸ್ಥೆ ರಕ್ಷಿಸಿದ ಅಪರೂಪದ ಊಸರವಳ್ಳಿ ಪ್ರಾಣಿಯನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿ ಮಾತನಾಡಿದರು

ಪಶ್ಚಿಮಘಟ್ಟ ಕಾಡುಗಳಲ್ಲಿ ವಿಶೇಷವಾಗಿ ಕಾಣಸಿಗುವ ಊಸರವಳ್ಳಿಯು ನಮ್ಮ ಭಾಗದ ಕೊಂಚಾವರ ಅರಣ್ಯದಲ್ಲಿಯೂ ವಾಸಿಸುತ್ತದೆ.360 ಡಿಗ್ರಿಯಲ್ಲಿ ಮುಖವನ್ನು ತಿರುಗಿಸಿ ನೋಡಬಲ್ಲ ಅಪರೂಪದ ದೇಹರಚನೆಯ ಜೀವಿಯಾಗಿದೆ.ಸಂರಕ್ಷಿಸಿದ ಈ ಪ್ರಾಣಿಯನ್ನು ಕೊಂಚಾವರ ಕಾಡಿನಲ್ಲಿ ಒಯ್ದು ಬಿಡುವದಾಗಿ ಹೇಳಿದರು.

ಹಾವು, ಉಡ ಮೊದಲಾದ ಜೀವಿಗಳ ಬಗ್ಗೆ ಸಾಮಾನ್ಯರಿಗೆ ಸಾಕಷ್ಟು ತಿಳುವಳಿಕೆಯ ಅವಶ್ಯಕತೆ ಇದೆ.ಹಾವುಗಳಲ್ಲಿ ಬೆರಳೆಣಿಕೆಯ ಹಾವುಗಳು ಮಾತ್ರ ವಿಷಕಾರಿಯಾಗಿರುತ್ತವೆ.ಹಾವು ಕಚ್ಚಿ ಸತ್ತರು ಎಂದು ಹೇಳಲಾಗುವ ವ್ಯಕ್ತಿಗಳಲ್ಲಿ ಶೇ 90 ರಷ್ಟು ಜನ ಹೃದಯಾಘಾತದಿಂದ ಸಾವನ್ನಪ್ಪುತ್ತಾರೆ ಎಂದು ಅಧ್ಯಯನವೊಂದು ತಿಳಿಸಿದೆ.

ಹಾವು,ಉಡ ಸೇರಿದಂತೆ ಅಪರೂಪದ ಜೀವಿಗಳು ಕಂಡು ಬಂದರೆ ತಕ್ಷಣ ತಿಳಿಸಲು ಮನವಿ ಮಾಡಿದರು.(ವಿನಯ ಪಸಾರ ಅವರ ಸಂಪರ್ಕ ಸಂಖ್ಯೆ 9482454999)

ಸುದಿಗೋóಷ್ಠಿಯಲ್ಲಿ ಸಿದ್ಧಾರ್ಥ ಹಾಗೂ ಪ್ರೇಮ ಉಪಸ್ಥಿತರಿದ್ದರು.

ಬೀದಿ ವ್ಯಾಪಾರಿಗಳ ಸೌಕರ್ಯಕ್ಕಾಗಿ ಸಹಾಯಧನ ಮಂಜೂರು ಮಾಡಲು ಒತ್ತಾಯ

ಕಲಬುರಗಿ,ಅ.6-ಬೀದಿ ವ್ಯಾಪಾರಿಗಳ ಸೌಕರ್ಯಕ್ಕಾಗಿ ಧನ ಮಂಜೂರು ಮಾಡುವಂತೆ, 13.10.2014 ರಂದು ಜರುಗಿದ ಮಹಾನಗರ ಪಾಲಿಕೆಯ ಠರಾವು ಪ್ರಕಾರ ಶೀಘ್ರ ಹಣ ಬಿಡುಗಡೆ ಮಾಡುವಂತೆ ಕರ್ನಾಟಕ ರಾಜ್ಯ ಬೀದಿ ವ್ಯಾಪಾರಿಗಳ ಸಂಘ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿತು.

ಸಂಘದ ರಾಜ್ಯಾಧ್ಯಕ್ಷ ಜಗನ್ನಾಥ ಎಸ್.ಸೂರ್ಯವಂಶಿ, ಕಲಬುರಗಿ ಉತ್ತರ ವಲಯ ಉಪಾಧ್ಯಕ್ಷ ವಿ.ಹೆಚ್.ವಾಲೀಕಾರ, ಕ.ನ.ನಿ.ವೇದಿಕೆ ರಾಜ್ಯಾಧ್ಯಕ್ಷ ಹೆಚ್.ಎಸ್.ಬಸನಾಳಕರ್, ಎಳಕುಳ್ಳ ಮಲ್ಲಮ್ಮ ದೇವಿ ಟ್ರಸ್ಟ್ ಅಧ್ಯಕ್ಷ ಉಮಾಕಾಂತ ಕೆ.ಆಲಕುಂಟಿ, ದಲಿತ ಸೇನೆ ಅಧ್ಯಕ್ಷ ವೆಂಕಟೇಶ ಕಾಂಬಳೆ, ಕ.ಬಿ.ವ್ಯಾ.ಸಂಘದ ಜಿಲ್ಲಾಧ್ಯಕ್ಷ ಅಮೃತ ಸಿ.ಪಾಟೀಲ ಅವರನ್ನೊಳಗೊಂಡ ನಿಯೋಗ ಮಹಾನಗರ ಪಾಲಿಕೆ ಆಯುಕ್ತರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿ ನಗರದಲ್ಲಿ 4 ರಿಂದ 5 ಸಾವಿರ ಬೀದಿ ವ್ಯಾಪಾರಿಗಳಿದ್ದು, ಅವರು ವಿವಿಧ ರೀತಿಯ ಸಣ್ಣ-ಪುಟ್ಟ ವ್ಯಾಪಾರ ನಡೆಸುತ್ತಿದ್ದಾರೆ. ಸದ್ಯದ ಮಟ್ಟಿಗೆ 200 ರಿಂದ 250 ಜನರನ್ನು ಗುರುತಿಸಿ ಪ್ರತಿ ವ್ಯಾಪಾರಸ್ಥರಿಗೆ ರೂ.2,500/- ಸಹಾಯಧನ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.